ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾಧಿಕಾರಿಗಳ ಸೇವೆ ಕಾಯಂಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯು ಶುಕ್ರವಾರ 5ನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಶುಶ್ರೂಷಾಧಿಕಾರಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ.
ಶುಶ್ರೂಷಾಧಿಕಾರಿಗಳ ಪ್ರತಿಭಟನೆಯು ತಾರಕಕ್ಕೆ ಏರುತ್ತಿರುವ ಬೆನ್ನಲ್ಲೇ ಗುರುವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಂಘದ ಅಧ್ಯಕ್ಷೆ ರಾಧಸುರೇಶ್ ಸೇರಿ ಕೆಲವು ಮುಖಂಡರನ್ನು ಆರೋಗ್ಯ ಸೌಧಕ್ಕೆ ಕರೆಸಿ ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದರು.
ಎನ್‌ಎಚ್‌ಎಂನವರಿಗೆ ಸಮಾನ ವೇತನ ನೀಡಲಾಗುವು ದಿಲ್ಲ. ಈ ಬಗ್ಗೆ ಮಾ.10 ಅಥವಾ 11 ರಂದು ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸೋಣ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಆದರೆ, ಇದಕ್ಕೊಪ್ಪದ ಪ್ರತಿಭಟನಾ ನಿರತರು ಬೇಡಿಕೆ ಈಡೇರಿಸುವುದಾಗಿ ಲಿಖೀತ ರೂಪದಲ್ಲಿ ಬರೆದುಕೊಡುವಂತೆ ಒತ್ತಾಯಿಸಿದರು. ಲಿಖೀತ ರೂಪದಲ್ಲಿ ಕೊಡಲು ಬರುವುದಿಲ್ಲ. ಮಾತಿನಲ್ಲಿ ನಂಬಿಕೆ ಇಡುವಂತೆ ಸಚಿವರು ಹೇಳಿದರು. ಇದಕ್ಕೆ ಮಣಿಯದ ಶುಶ್ರೂಷಾಧಿಕಾರಿಗಳು ಮತ್ತೆ ಪ್ರತಿಭಟನೆ ಮುಂದುವರೆಸಿದ್ದಾರೆ. ಸರ್ಕಾರವು ಬೇಡಿಕೆ ಈಡೇರಿಸುವವರೆಗೂ ಪ್ರತಿ ಭಟನೆ ಮುಂದುವರಿಸುವುದಾಗಿ ಶುಶ್ರೂಷಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆ ಅನಿವಾರ್ಯ: ಸಂಘದ ಅಧ್ಯಕ್ಷೆ ರಾಧಾಸುರೇಶ್ ಮಾತನಾಡಿ, ಸಾಮಾನ್ಯ ಜನರಿಗೆ ಸೇವೆ ಮಾಡುವಲ್ಲಿ ತೊಂದರೆ ಕೊಡಲು ಇಚ್ಛಿಸುವುದಿಲ್ಲ. ಆದರೆ, ನಮ್ಮನ್ನು ಸೌಲಭ್ಯಗಳಿಂದಲೂ ಕಡೆಗಣಿಸಿರುವುದರಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ನಾವು ಈ ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದರು.









































