ಹಾವೇರಿ : ರಸ್ತೆಗಳು ಆ ನಗರ ಮತ್ತು ಹಳ್ಳಿಗಳ ಜೀವನಾಡಿ. ಅಭಿವೃದ್ಧಿಯ ಸಂಕೇತ.ವ್ಯಾಪಾರ,ವಾಣಿಜ್ಯ ಸಂಚಾರಕ್ಕೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಇರುವ ನರನಾಡಿಗಳು. ಅವುಗಳು ಶುದ್ಧವಾಗಿದ್ದಾಗಲೇ ಆ ನಗರ ಪ್ರದೇಶ ಅಭಿವೃದ್ಧಿ ಹೊಂದಿದೆ ಎಂದು ಭಾವಿಸಬಹುದು.
ಇಷ್ಟೆಲ್ಲಾ ನಿಮಗೇಕೆ ಹೇಳುತ್ತಿದ್ದೇನೆ ಎಂದರೆ ನೀವು ಯಾವಾಗಲಾದರೋ ಗುತ್ತಲ- ನೆಗಳೂರು ಮಾರ್ಗ ಮತ್ತು ನೆಗಳೂರು -ಹೊಸರಿತ್ತಿ ಮಾರ್ಗ, ಹೊಸರಿತ್ತಿ -ಅಕ್ಕೂರ್ ಮಾರ್ಗ, ಗುತ್ತಲ- ಹಾವೇರಿ ಮಾರ್ಗ ಸಂಚರಿಸಿದ್ದೀರಿ ಅಂದರೇ ನಿಮಗೆ ಒಂದು ಅನುಭವ ಬಂದಿರುತ್ತೆ.
ಹಾವೇರಿ ತಾಲೂಕಿನ ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಡಳಿತ, ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿ ಕುಳಿತಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಅಷ್ಟೇ ಏಕೆ ಈ ರಾಜ್ಯದ ಉಪಸಭಾಪತಿ ರುದ್ರಪ್ಪ ಲಮಾಣಿ ಯವರ ತವರು ಜಿಲ್ಲೆ ಹಾವೇರಿ. ಆ ತಾಲೂಕು ಶಾಸಕರು ಕೂಡಾ ಹೌದು. ಮಾನ್ಯ ಶಾಸಕರು ಎಂದಾದರೂ ಈ ರಸ್ತೆಯಲ್ಲಿ ಸಂಚರಿಸಿದರೋ ಇಲ್ಲವೋ ಗೊತ್ತಿಲ್ಲ ಅಥವಾ ಹೋಗಿದ್ದರೂ ಸುಮ್ಮನಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.
ಈ ಭಾಗದ ಜನ ಏನ್ ಕರ್ಮ ಮಾಡಿದ್ದಾರೋ ಗೊತ್ತಿಲ್ಲ. ಆಡಳಿತ ವರ್ಗ ಮತ್ತು ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುವುದಂತು ಗ್ಯಾರಂಟಿ. ಇದು ಇವತ್ತಿನ ಕಥೆಯಲ್ಲ ಸುಮಾರು ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವುದು ದುರಂತದ ಸಂಗತಿ. ಇಲ್ಲ ಅಭಿವೃದ್ಧಿ ಮಾಡಿದ್ದೀವಿ ಎಂದು ಗುಳುಂ – ಸ್ವಾಹ ಎಂಬ ಯೋಜನೆ ಜಾರಿಯಲ್ಲಿ ಇದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಮುಂದೆ ಆದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇತ್ತ ಕಡೆ ಗಮನಹರಿಸಿ ತಗ್ಗು- ಗುಂಡಿ ಬಿದ್ದ ರಸ್ತೆಗಳನ್ನು ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.








































