ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಆಪ್ತ ಮತ್ತು ಹಿಂದುಳಿದ ವರ್ಗದ ನಾಯಕ ಕೆ ಎನ್ ರಾಜಣ್ಣ ಈ ಹಿಂದೆ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಹೇಳಿದ್ದರು. ಆದರೆ ಸಪ್ಟೆಂಬರ್ ಬರುವ ಮೊದಲೇ ಆಗಸ್ಟ್ ಕ್ರಾಂತಿಯಲ್ಲಿ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದು ವಿಪರ್ಯಾಸದ ಸಂಗತಿ.
ಹೀಗಿರುವಾಗ ಬಿಜೆಪಿಯ ಶ್ರೀರಾಮುಲು ಕೆ.ಎನ್ ರಾಜಣ್ಣ ಅವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿ ಸರಿ ಇಲ್ಲ, ಅವರು ಸತ್ಯ ಹೇಳಿದ್ದಕ್ಕಾಗಿ ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂಬ ಗಂಭೀರ ಮಾಡಿದ್ದಾರೆ ಹಾಗೆ ಅವರಿಗೆ ಆತ್ಮಸ್ಥೈರ್ಯ ತುಂಬಿ ತಾವು ಬಿಜೆಪಿಗೆ ಬರುವುದಾದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಆಫರ್ ನೀಡಿದ್ದಾರೆ.
ರಾಜಣ್ಣ ಹೇಳಿದ್ದೇನು..?: ತುಮಕೂರಿನಲ್ಲಿ ಕಳೆದ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಜಣ್ಣ ಮತಗಳ್ಳತನ ನಡೆದಿರೋದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೇ ಈಗ ಹೇಳುತ್ತಿರೋದು ನಮಗೆ ನಾಚಿಕೆ ಆಗಬೇಕು. ಅಲ್ಲದೇ ಇದನ್ನೆಲ್ಲಾ ಮಾತನಾಡೋಕೆ ಹೋದ್ರೆ ಏನೇನೋ ಆಗುತ್ತೆ. ವೋಟರ್ ಲಿಸ್ಟ್ ಎಲ್ಲಾ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ?. ಈ ಅಕ್ರಮಗಳು ನಡೆದಿರೋ ಸತ್ಯ ಇದರಲ್ಲಿ ಸುಳ್ಳು ಏನಿಲ್ಲ. ಅಕ್ರಮಗಳು ನಮ್ಮ ಕಣ್ಮುಂದೆನೇ ನಡೆದಿದ್ದವಲ್ಲಾ ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಪಕ್ಷದ ರಾಜಕಾರಣದಲ್ಲಿ ಸತ್ಯ ಮಾತನಾಡುವವರಿಗೆ ಪಕ್ಷದಲ್ಲಿ ಸ್ಥಾನಮಾನ ಇಲ್ಲ ಎಂಬುದನ್ನ ತೋರಿಸಿಕೊಟ್ಟಿದೆ. ರಾಜ್ಯದ ಬಲಿಷ್ಠ 4ನೇ ಸಮುದಾಯವಾದ ವಾಲ್ಮೀಕಿ ಸಮುದಾಯದ ಬಿ. ನಾಗೇಂದ್ರ ಅವರನ್ನು ವಾಲ್ಮೀಕಿ ನಿಗಮದ ಹಗರಣದಲ್ಲಿ ಬಂಧಿಸಿ ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.
ಒಟ್ಟಿನಲ್ಲಿ ರಾಜಣ್ಣ ಅವರ ಮೂಲಕ ಇದೀಗ ಸಿದ್ದರಾಮಯ್ಯ ಸರ್ಕಾರದ ಎರಡನೇ ವಿಕೆಟ್ ಪತನವಾಗಿದೆ. ಈ ಹಿಂದೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪರಿಶಿಷ್ಟ ಪಂಗಡಗಳ ಇಲಾಖೆ ಅಧೀನದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆಪಾದನೆಗೆ ಗುರಿಯಾಗಿದ್ದ ಬಿ ನಾಗೇಂದ್ರ ಅವರು ಯುವಜನ ಸೇವೆ, ಕ್ರೀಡೆ ಮತ್ತು ಎಸ್‌ಟಿ ಕಲ್ಯಾಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಜ್ಯದಲ್ಲಿ ಆಯ್ಕೆಯಾಗಿ ಬಂದಿರುವ ವಾಲ್ಮೀಕಿ ಸಮುದಾಯದ ಹದಿಮೂರು ಶಾಸಕರು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ವಾಲ್ಮೀಕಿ ಸಮುದಾಯಕ್ಕೆ ಎರಡು ಸಚಿವ ಸ್ಥಾನಗಳನ್ನು ಕೂಡಲೇ ನೀಡಬೇಕೆಂದು ಅಗ್ರಹಿಸಿದ್ದಾರೆ.
ವಿಶೇಷ ವರದಿ: ಆರ್ ಎಸ್ ರಾಮನಗೌಡ್ರ
ಸಂಪಾದಕರು :ಹಾವೇರಿ ಎಕ್ಸ್ ಪ್ರೆಸ್








































