ಶಿರಹಟ್ಟಿ: ಸರ್ಕಾರ ಬಡವರಿಗೆ ಉಚಿತವಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೀಡುವ ಪಡಿತರ ಅಕ್ಕಿಯನ್ನು ಯಾವುದೆ ಪರವಾನಗಿ ಇಲ್ಲದೆ 11ಕ್ವಿಂಟಲ್33 ಕೇಜಿ ಅಕ್ಕಿಯನ್ನು ಅನಧಿಕೃತವಾಗಿ ಸಾಗಿಸುವ ಮಾರ್ಗ ಮಧ್ಯದಲ್ಲಿ ಪೋಲೀಸರು ದಾಳಿ ನಡೆಸುವ ಮೂಲಕ ಟಾಟಾ ಏಸ್ ವಾಹನವನ್ನು ತಮ್ಮ ವಶಕ್ಕೆ ಪಡೆದಿರುವ ಘಟನೆ ಕಳೆದ ಶುಕ್ರವಾರ ಬೆಳಿಗ್ಗೆ ಶಿರಹಟ್ಟಿ ಪಟ್ಟಣದ ಬಳಿ ನಡೆದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಶಂಭುಲಿಂಗ ತಂದೆ ದಿಲೀಪಶೆಟ್ಟರ್ ಅಂಗಡಿ ಎಂಬ ವ್ಯಕ್ತಿಯು ತಮ್ಮ ಟಾಟಾ ಏಸ್ ಕೆಎ-26 ಬಿ-4253 ವಾಹನದೊಳಗೆ ಒಟ್ಟು 23 ವಿವಿಧ ಪ್ಲಾಸ್ಟೀಕ್ ಚೀಲದಲ್ಲಿ ಪಡಿತರ ಅಕ್ಕಿಯನ್ನು ತುಂಬಿಕೊಂಡು ಬೆಳ್ಳಟ್ಟಿ ಕಡೆಯಿಂದ ಶಿರಹಟ್ಟಿ ಮಾರ್ಗವಾಗಿ ಗದಗ ನಗರಕ್ಕೆ ಅಕ್ಕಿಯನ್ನು ಮಾರಾಟ ಮಾಡಲು ಹೋಗುವಾಗ ಬಲೆಗೆ ಬಿದ್ದಿದ್ದಾನೆ.
ಬೆಳ್ಳಟ್ಟಿ-ಶಿರಹಟ್ಟಿ ರಸ್ತೆಯಲ್ಲಿ ಶಿರಹಟ್ಟಿ ಪಟ್ಟಣದ ಬಳಿ ಬೈಪಾಸ್ ರಸ್ತೆಯಲ್ಲಿ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಪಡಿತರ ಅಕ್ಕಿಯನ್ನು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪೋಲೀಸ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸುವ ಮೂಲಕ ಒಟ್ಟು 26,059/- ರೂ.ಮೌಲ್ಯದ ಪಡಿತರ ಅಕ್ಕಿಯ ಸಮೇತ ಟಾಟಾ ಏಸ್ ವಾಹನವನ್ನು ಸೀಜ್ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆಹಾರ ನಿರೀಕ್ಷಕಿ ಮಂಜುಳಾ ಆಕಳದ ಇವರು ಆರೋಪಿತನ ವಿರುದ್ದ ಶಿರಹಟ್ಟಿ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ನಿರೀಕ್ಷಕಿ ಮಂಜುಳಾ ಆಕಳದ, ಪಿಎಸ್ಐ ಈರಪ್ಪ ರಿತ್ತಿ, ಬೆಳ್ಳಟ್ಟಿ ಗ್ರಾಮ ಲೆಕ್ಕಾಧಿಕಾರಿ ಚನ್ನವೀರಯ್ಯ ಸಿದ್ದಾಂತಮಠ, ಗ್ರಾಮ ಸಹಾಯಕ ಮಂಜುನಾಥ್ ಸನದಿ, ಪೋಲೀಸ್ ಪೇದೆಗಳಾದ ಅಶೋಕ ದಾನಿ, ಸಿ.ಸಿ.ಗುಂಡೂರಮಠ ಉಪಸ್ಥಿತರಿದ್ದರು.
*ವರದಿ*✍️ಚಂದ್ರಶೇಖರ ಸೋಮಣ್ಣವರ








































